ಕಾರೀಯಾತ್, ಥಾಮಸ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 1577-1617. ಪ್ರವಾಸಿ. ಸಾಹಸಿಗ. ಪಾದ್ರಿಯ ಮಗ. ಹುಟ್ಟಿದ್ದು ಸಾಮರ್‍ಸೆಟ್‍ನ ಓಡ್‍ಕೂಂಬ್‍ನಲ್ಲಿ. ಆಕ್ಸ್‍ಫರ್ಡ್ ಮತ್ತು ವಿಂಚೆಸ್ಟರ್‍ನಲ್ಲಿ ವಿದ್ಯಾಭ್ಯಾಸ ನಡೆಸಿದ. ಒಂದನೆಯ ಜೇಮ್ಸ್ ಇಂಗ್ಲೆಂಡಿನ ರಾಜನಾದ ಮೇಲೆ ಆತನ ಹಿರಿಯ ಮಗ ರಾಜಕುಮಾರ ಹೆನ್ರಿಯ ಬಳಿ ನೌಕರಿಗೆ ಸೇರಿ ಅನಂತರ ರಾಜಾಸ್ಥಾನದವರಲ್ಲಿ ಒಬ್ಬನಾದ. ಸ್ವಯಂ ಪ್ರತಿಷ್ಠೆಯನ್ನು ಮೆರೆಯುವುದರಲ್ಲಿ ಕಾರೀಯಾತ್ ಹೆಸರಾದವ. 1608ರಲ್ಲಿ ಫ್ರಾನ್ಸ್, ಇಟಲಿ, ಸ್ವಿಟ್ಜರ್‍ಲೆಂಡ್ ಮತ್ತು ಜರ್ಮನಿ ದೇಶಗಳಲ್ಲಿ ಸುಮಾರು ಎರಡು ಸಾವಿರ ಮೈಲಿಗಳಷ್ಟು ಕಾಲುನಡಿಗೆಯಲ್ಲೇ ಪ್ರವಾಸಮಾಡಿ ಬಂದ. ಈ ಪ್ರವಾಸದಿಂದ ಉತ್ತೇಜಿತನಾದ ಈತ ಭಾರತಕ್ಕೆ ಬಂದು ಮೊಗಲ್ ಚಕ್ರವರ್ತಿಯ ವೈಭವವನ್ನು ನೋಡಿ ಆನೆಯ ಮೇಲೆ ಸವಾರಿ ಮಾಡಬೇಕೆಂದು ಮನಸ್ಸು ಮಾಡಿದ. 1614ರಲ್ಲಿ ಭಾರತದ ಕಡೆಗೆ ಪ್ರವಾಸ ಹೊರಟು 1615ರ ಜುಲೈ ತಿಂಗಳಲ್ಲಿ ಆಗ್ರಾಕ್ಕೆ ಬಂದ. ಆಗ ಮೊಗಲ್ ಚಕ್ರವರ್ತಿ ಅಜ್ಮೀರದಲ್ಲಿದ್ದುದರಿಂದ ಅಲ್ಲಿಗೇ ಹೋದ. ಅಲ್ಲಿ ಇಂಗ್ಲೆಂಡಿನ ರಾಯಭಾರಿಯಾಗಿ ಮೊಗಲ್ ಆಸ್ಥಾನಕ್ಕೆ ಬಂದಿದ್ದ ಸರ್ ಥಾಮಸ್ ರೋನ ಪರಿಚಯ ಮಾಡಿಕೊಂಡು ಅವನೊಂದಿಗೆ ಸ್ನೇಹ ಬೆಳೆಸಿದ. 14 ತಿಂಗಳ ಕಲ ಅಜ್ಮೀರದಲ್ಲಿದ್ದ. ಅಲ್ಲಿಂದ ಆಗ್ರಾಕ್ಕೆ ಹಿಂದಿರುಗಿ 1617ರ ನವೆಂಬರ್‍ನಲ್ಲಿ ಸೂರತ್ ತಲುಪಿದ. ತಲುಪಿದವನೇ ಜ್ವರದಿಂದ ನರಳತೊಡಗಿ 1617ರ ಡಿಸೆಂಬರ್‍ನಲ್ಲಿ ಅಲ್ಲೇ ನಿಧನನಾದ. ತಪತೀನದಿಯ ದಡದ ಮೇಲೆ ಅವನ ಸಮಾಧಿಯಾಯಿತು. ಈಚೆಗೆ ಸೂರತ್ತಿನ ಕಲೆಕ್ಟರ್ ಆಗಿದ್ದ ಸರ್ ವಿಲಿಯಂ ಮಾರಿಸನ್ ಆ ಸಮಾಧಿಯನ್ನು ಪತ್ತೆ ಹಚ್ಚಲು ಹೋಗಿ ವಿಫಲನಾದ. ಕಾರೀಯಾತ್ಸ್ ಕ್ರೂಡಿಟೀಸ್ ಎಂಬುದು ಕಾರೀಯಾತನ ಮೊದಲ ಪ್ರವಾಸ ಕಥನ. ಇದರಲ್ಲಿ ಇವನ ಸೂಕ್ಷ್ಮಬುದ್ಧಿ ಮತ್ತು ವಿದ್ವತ್ತನ್ನು ಕಾಣಬಹುದು. ಕಾರೀಯಾತ್ ಹಾಸ್ಯಗಾರನಲ್ಲದೆ ಒಳ್ಳೆಯ ಭಾಷಾಶಾಸ್ತ್ರಜ್ಞನೂ ಆಗಿದ್ದ.    